True Talent

 ನನ್ನ ತಮ್ಮ ಶಂಕರ

- ಅನಂತ್ ನಾಗ್ 

ಶಂಕರನಾಗ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಗು ಪ್ರತಿಭಾವಂತ ನಟ. ಪ್ರತಿ ಆಟೋ ಚಾಲಕರು ಆರಾಧಿಸಿ ಪ್ರೀತಿಸುವ ಕಲಾವಿದ. ಚಿತ್ರರಂಗ, ರಂಗಭೂಮಿ, ಸಾಮಾಜಿಕ, ರಾಜಕೀಯ, ವಾಣಿಜ್ಯ  ಹೀಗೆ ಹಲವಾರು ಕ್ಷೇತ್ರಗಳಲ್ಲಿ ಶಂಕರ್ ನಾಗ್ ಅವರಿಗಿರುವ ಆಸಕ್ತಿ, ಹೊಸ ಹೊಸ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಅವರ ಛಲ, ಹಿಡಿದ ಕೆಲಸವನ್ನು ಸಾಕಾರಗೊಳಿಸುವಲ್ಲಿ ಅವರಿಗಿರುವ ಶ್ರದ್ಧೆ, ಕಷ್ಟಗಳನ್ನು ಕಂಡು ಕುಗ್ಗದೆ ಹಠದಿಂದ ಮುನ್ನುಗ್ಗುವ ಅವರ ಸ್ವಭಾವ ಎಲ್ಲವೂ ಅಣ್ಣ ಅನಂತ್ ನಾಗ್ ಅವರು ಕಂಡಂತೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಅಣ್ಣ ತಮ್ಮ ಒಟ್ಟಿಗೆ ಕಳೆದ ಬಾಲ್ಯ, ತಂದೆ ತಾಯಿಯೊಂದಿಗೆ ಅವರಿಗಿದ್ದ ಬಾಂಧವ್ಯ, ಅಕ್ಕನ ಜೊತೆಗಿದ್ದ ಅಕ್ಕರೆ ಎಲ್ಲವೂ ಓದುಗರ ಕಣ್ಮುಂದೆ ಸುಳಿದೋಗುತ್ತವೆ. ತಮ್ಮನಾಗಿದ್ದರೂ ಎಷ್ಟೋ ಬಾರಿ ಅನಂತ್ ನಾಗ್ ಅವರಿಗೆ ಶಂಕರ್ ನಾಗ್ ಅಣ್ಣನ ಸ್ಥಾನದಲ್ಲಿ ಬೆನ್ನೆಲುಬಾಗಿ ನಿಂತಿರುವ ನಿದರ್ಶನಗಳಿವೆ.

ಚಿತ್ರರಂಗದಲ್ಲಿ ಶಂಕರ್ ನಾಗ್ ಅವರು ಕಂಡ ಸೋಲು-ಗೆಲುವು, ಕಷ್ಟ-ನಷ್ಟ, ಕೀರ್ತಿ-ಪ್ರಶಸ್ತಿ, ಅವಮಾನ-ಸನ್ಮಾನ ಎಲ್ಲದರ ಬಗೆಗಿನ ನೆನಪಿನ ಬುತ್ತಿಯನ್ನು ಅನಂತ್ ನಾಗ್ ಬಿಚ್ಚಿಡುತ್ತಾರೆ. ಆಗಿನ ಕಾಲಕ್ಕೆ ಶಂಕರ್ ನಾಗ್ ಅವರಿಗಿದ್ದ ದೂರದೃಷ್ಟಿ, ತಂತ್ರಜ್ಞಾನವನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಯೋಚನೆ, ವಾತಾವರಣ ತಮಗೆ ಪೂರಕವಾಗಿರದಿದ್ದರೂ ತಮ್ಮ ಕನಸುಗಳ್ನು ನನಸಾಗಿಸುವ ಹಂಬಲ, ರಂಗಭೂಮಿಯಲ್ಲಿ ಅವರಿಗಿದ್ದ ಒಲವು, ಚಿತ್ರ ನಿರ್ದೇಶನದಲ್ಲಿ ಮಾಡುವ ವಿವಿಧ ಪ್ರಯೋಗಗಳು, ಇವೆಲ್ಲವು ಅನಂತ್ ನಾಗ್ ಅವರ ಸ್ಮೃತಿಪಟಲದಲ್ಲಿ  ಎಷ್ಟು ಗಾಢವಾಗಿ ಬೇರೂರಿದೆ ಎಂಬುದು ಪುಸ್ತಕದುದ್ದಕ್ಕೂ ಓದುಗರ ಅರಿವಿಗೆ ಬರುತ್ತದೆ.

ಬೆಂಗಳೂರಿನಲ್ಲಿ ಈಗ ಆರಂಭವಾಗಿರುವ ಮೆಟ್ರೋ ಯೋಜನೆಯ ಚಿಂತನೆಯನ್ನು ಶಂಕರ್ ನಾಗ್ ಅವರು 25 ವರ್ಷಗಳ ಹಿಂದೆ ಮಾಡಿದ್ದರು. ದೇಶ ವಿದೇಶಗಳನ್ನು ಸುತ್ತಿ, ಅಲ್ಲಿ ಕಂಡ ಎಷ್ಟೋ ಯೋಜನೆಗಳನ್ನು ನಮ್ಮ ದೇಶಕ್ಕೂ ಅಳವಡಿಸಿ ಪ್ರಗತಿಯತ್ತ ಸಾಗುವ ನಿರೀಕ್ಷೆ ಅವರದ್ದಾಗಿತ್ತು. ಅಮೂಸ್ಮೆಂಟ್ ಪಾರ್ಕ್, ಕಂಟ್ರಿ ಕ್ಲಬ್  ನಂತಹ ಯೋಚನೆಗಳು ಅವರ ಯೋಜನೆಗಳ ಪಟ್ಟಿಯಲ್ಲಿ ಇದ್ದವು ಎಂದು ಅನಂತ್ ನಾಗ್ ಅವರ ವಿವರಣೆಯಿಂದ  ತಿಳಿದು ಬರುತ್ತದೆ.

ಪುಸ್ತಕ ಮುಗಿಯುವ ಹೊತ್ತಿಗೆ ಶಂಕರ್ ನಾಗ್ ಅವರನ್ನು ನಾವು ಕೇವಲ ಒಬ್ಬ ಕಲಾವಿದನಾಗಿ ನೋಡದೆ, ಒಬ್ಬ ಸೃಜನಶೀಲ, ಪ್ರತಿಭಾವಂತ, ಧೀಮಂತ, ಭಾವನಾ ಜೀವಿಯಾಗಿ ನೋಡಲು ಶುರು ಮಾಡಿರುತ್ತೇವೆ. ಪುಸ್ತಕದುದ್ದಕ್ಕೂ ನಮ್ಮ ಜೊತೆ ಜೀವಂತವಾಗಿದ್ದ  ಶಂಕರ್ ನಾಗ್ ಅವರು ವಾಸ್ತವದಲ್ಲಿ ನಮ್ಮೊಂದಿಗಿಲ್ಲ ಎನ್ನುವ ಸತ್ಯ ಒಪ್ಪಲು ಕಷ್ಟವಾಗುತ್ತದೆ. ಕನ್ನಡಿಗರ ಮನಸಿನಲ್ಲಿ ಅವರು ಸದಾ ಜೀವಂತ. 

ಎಲ್ಲದರ ಬಗ್ಗೆಯೂ ಅನಂತ್ ನಾಗ್ ಅವರು ನಮ್ಮ ಮನಸ್ಸಿ ಗನಿಸಿದಂತೆ ನೇರವಾಗಿ, ಯಾವುದೇ ಉತ್ಪ್ರೇಕ್ಷೆ ಇಲ್ಲದೇ ಹೇಳಿಕೊಂಡಿದ್ದಾರೆ. ಅನಂತ್ ನಾಗ್ ಅವರು ಒಬ್ಬ ಬರಹಗಾರನಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಒಬ್ಬ ಸ್ನೇಹಿತ ಸಮಾನನಾದ ಅಣ್ಣ ನಾಗಿಯೆ ಓದುಗರಿಗೆ ಹತ್ತಿರವಾಗುತ್ತಾರೆ. 

- ಪ್ರಿಯ ಕರ್ಜಿಗಿ

Comments

Popular posts from this blog

Kaveri's Detective Story

Dreamy Facts

It's a Deal !