Trek in search of Flying Lizard

ಕರ್ವಾಲೊ

ಕೆ. ಪಿ. ಪೂರ್ಣಚಂದ್ರ ತೇಜಸ್ವಿ   

ಪುಸ್ತಕದ ಮುಕಪುಟ ನೋಡಿ ಕಥೆ ಭಯಾನಕವಾಗಿರಬಾಹುದು ಅಂತ ನೀರಿಕ್ಷಿಸಿದ್ದೆ. ಓದುತ್ತಾ ಹೋದಂತೆ ನಿಸರ್ಗದ ನೀಗೂಢತೆಯ ಪರಿಚಯವಾಗುತ್ತಾ ಹೋಯಿತು. ಓದುವಷ್ಟು ಹೊತ್ತು ಪರಿಸರದ ಮಧ್ಯ ಇದ್ದಂತ ಅನುಭವ. 

ಸೃಷ್ಟಿ ಎಷ್ಟು ಸೌಮ್ಯವೋ ಅಷ್ಟೇ ನಿಗೂಢ, ರೌದ್ರ. ಅದರ ಆಳಕ್ಕೆ ಇಳಿದಷ್ಟೂ ಅದರ ವಿಸ್ಮಯ, ವೈಚಿತ್ರ್ಯ ಹೆಚ್ಚುತ್ತಾ ಹೋಗುತ್ತದೆ. ಸಾವಿರಾರು ಜೀವರಾಶಿಗಳು ಕಾಲಾಂತರದಲ್ಲಿ ವಿಕಸನಗೊಂಡು ಈ ಪರಿಸರಕ್ಕೆ ಹೊಂದಿಕೊಂಡು ಬದುಕುವ ದಾರಿ ಕಂಡುಕೊಂಡಿವೆ. ಕೆಲವು ಇನ್ನೂ ವಿಕಸನದ ಪ್ರಕ್ರಿಯೆಯಲ್ಲಿದ್ದರೆ, ಮತ್ತೆ ಹಲವು ಅಳಿವಿನಂಚಿನಲ್ಲಿವೆ.ಇಂಥದ್ದೇ ಒಂದು ಜೀವಿಯ ಹುಡುಕಾಟ, ಅನ್ವೇಷಣೆಯೇ ಕರ್ವಾಲೊ. ಮೂಡಗರೆ, ನಾರ್ವೆ ಸುತ್ತಮುತ್ತಲ ಕಾಡಿನಲ್ಲಿ ನಡೆವ ಈ ಪಯಣ ಓದುಗರಿಗೆ ಪರಿಸರದ ವಿಸ್ಮಯಗಳ ಪರಿಚಯ ಮಾಡಿಸುತ್ತದೆ.

ತೇಜಸ್ವಿಯವರ ನೈಜ ನಿರೂಪಣೆಯಿಂದ ಕರ್ವಾಲೊ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ ಎಂದು ಭಾಸವಾಗುತ್ತದೆ. ಕಥೆಯ ಪಾತ್ರದಾರಿಗಳ ಮೂಲಕ ಹೊರಹೊಮ್ಮುವ ತಿಳಿ ಹಾಸ್ಯ, ಅವರಿಂದ ದೊರೆಯುವ ವೈಜ್ಞಾನಿಕ ಮಾಹಿತಿ, ತರ್ಕಬದ್ಧ ಸಂಭಾಷಣೆ ಓದುಗರನ್ನು ಹಿಡಿದಿಡುತ್ತದೆ. 

ಮಂಗನಿಂದಾದ ಮಾನವ, ಮಾನವನಿಂದ ಬೆಳೆದ ತಂತ್ರಜ್ಞಾನ, ಅದನ್ನು ಬೆಳೆಸಿ ನಡೆಸಿದ ಸಂಶೋಧನೆ. ಹೀಗೆ ಮಾನವ ಎಷ್ಟೇ ಮುಂದುವರೆದಿದ್ದರೂ, ಗತಿಸಿಹೋದ ಕಾಲದ ತೆಕ್ಕೆಯೊಳಗೆ ಇನ್ನೂ ಅರಿಯಲಾಗದ ಅನೇಕ ರಹಸ್ಯಗಳು ಜೀವಂತವಾಗಿವೆ. ಆಳಕ್ಕಿಳಿದಷ್ಟೂ ತಿಳಿದಷ್ಟು ಹೊಸ ಹೊಸ ಪದರಗಳು ಅನಾವರಣಗೊಳ್ಳುತ್ತದೆ. ಮತ್ತಷ್ಟು ತಿಳಿಯುವ ಕುತೂಹಲ ಹುಟ್ಟುತ್ತದೆ. ಅದೇ ಕುತೂಹಲ ಸಾಹಸಕ್ಕೆ ಕೈಹಾಕುವಂತೆ ಪ್ರಚೋದಿಸುತ್ತದೆ. 

ಅಷ್ಟೇನು ಸಾಕುಪ್ರಾಣಿ ಪ್ರಿಯೆಯಲ್ಲದ ನಾನು ಸಹ ತೇಜಸ್ವಿಯವರ ನಾಯಿ 'ಕಿವಿ'ಗೆ ಮನಸೋತೆ. 

ಒಟ್ಟಿನಲ್ಲಿ ತೇಜಸ್ವಿಯವರು ಕರ್ವಾಲೊದ ಮೂಲಕ ನಮ್ಮನ್ನು ಪರಿಸರದ ಒಡಲೊಳಗೆ ಒಂದು ಅಡ್ವೆಂಚರಸ್ ಟ್ರೆಕ್ಗೆ ಕರೆದೊಯ್ಯುತ್ತಾರೆ. ಸಾಗುವ ದಾರಿ ವಿಷಮವಾಗಿರದೆ ವಿನೋದದಿಂದ ಕೂಡಿದೆ. ನೀವು ಒಮ್ಮೆ ಹೋಗಿ ಬನ್ನಿ.

- ಪ್ರಿಯ ಕರ್ಜಿಗಿ

Comments

Popular posts from this blog

Kaveri's Detective Story

Dreamy Facts

It's a Deal !