Definition of Success
ಯಶಸ್ವಿ
- ಸುಧಾ ಮೂರ್ತಿ
ನನಗೆ ಸದಾ ಸ್ಫೂರ್ತಿಯಾಗಿರುವ ಸುಧಾ ಮೂರ್ತಿ ಅವರ ‘ಯಶಸ್ವಿ' ಕಾದಂಬರಿ ಕೈಗೆತ್ತಿಕೊಂಡಾಗ ಇದು ನನ್ನ ಮನಸ್ಸಿಗೆ ಇಷ್ಟೊಂದು ಹತ್ತಿರವಾಗುತ್ತದೆ ಎಂದು ಊಹಿಸಿರಲಿಲ್ಲ. ಕಥೆಯಲ್ಲಿ ಬರುವ ಕೆಲವು ಸನ್ನಿವೇಶಗಳು, ಪಾತ್ರದಾರಿಗಳು ಅನುಭವಿಸುವ ತೊಳಲಾಟ, ಜೀವನದ ಏರಿಳಿತಗಳು, ಎಲ್ಲೋ ಒಂದು ಕಡೆ ನಮ್ಮ ಬದುಕಿಗೂ ಹೋಲಿಸಿ ನೋಡುವಂತೆ ಪ್ರೇರೇಪಿಸುತ್ತವೆ.
ಟಾಟಾ ಇನ್ಸ್ಟಿಟ್ಯೂಟ್ನಿಂದ ಬೇರ್ಪಟ್ಟು ಎಲ್ಲರು ಅವರ ಗುರಿಯೆಡೆಗೆ ಹೆಜ್ಜೆ ಇಡುವಾಗ, “ಯಾರು ಯಶಸ್ವಿ?” ಎಂಬ ಪ್ರಶ್ನೆಗೆ ಎಲ್ಲರ ಉತ್ತರ ಉತ್ತರಾ ರಾವ್ ಎಂಬ ಹೆಸರಾಗಿರುತ್ತದೆ. ಇಪತ್ತು ವರ್ಷಗಳ ನಂತರ ಮತ್ತೆ ಎಲ್ಲರೂ ಸೇರಿದಾಗ ಅದೇ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. ಜಾನ್ಹವಿ ವಿದೇಶದಲ್ಲಿ ಸ್ವಂತ ಕಂಪನಿ ಕಟ್ಟಿದ್ದಾಳೆ ಆದರೆ ಸಂಸಾರದಲ್ಲಿ ಸೋತಿದ್ದಾಳೆ. ಸುಬ್ಬಣ್ಣ ದೊಡ್ಡ ಸಂಸ್ಥೆಯ ಮಾಲಿಕನಾದರೂ ಸಂಸಾರ-ಆರೋಗ್ಯ ಹದಗೆಟ್ಟಿದೆ. ಉತ್ತರಾ ಪ್ರೀತಿಯಲ್ಲಿ ಸ್ನೇಹದಲ್ಲಿ ಎಲ್ಲರಿಗಿಂತ ಮೇಲಿದ್ದಾಳೆ ಆದರೆ ತನ್ನ ವೃತ್ತಿ ಜೀವನ ಸಿಗದಾಯಿತೆಂಬ ಹತಾಷೆ ಅವಳನ್ನು ಕಾಡದೆ ಬಿಟ್ಟಿಲ್ಲ. ಅರವಿಂದ್ ಅವನಿಷ್ಟಪಡುವ ಸಮಾಜ ಸೇವೆ, ಆದರ್ಶಗಳಿಂದ ವಿಮುಖನಾಗಿ ಈಗ ಹೆಸರಾಂತ ರಾಜಕಾರಣಿಯಾಗಿದ್ದಾನೆ. ಸುಮಿತ್ರಾ ಈಗ ದೇಶ ಮೆಚ್ಚುವ ಸಂಶೋಧಕಿ, ಅವಳಿಗೆ ಸಂಶೋಧನೆಯೇ ಸಂಗಾತಿಯಾಗಿ ಉಳಿದಿದೆ.
“ಜೀವನದಲ್ಲಿ ಅನೇಕ ಘಟನೆಗಳು ಕಾದಂಬರಿಯಲ್ಲಿ ಬರುವ ಸನ್ನಿವೇಶಕ್ಕಿಂತಲೂ ವಿಚಿತ್ರ, ಅದ್ಭುತವಾಗಿರುತ್ತದೆ”. ಸುಧಾ ಮೂರ್ತಿ ಅವರು ಕಾದಂಬರಿಯಲ್ಲಿ ನೀಡುವ ಈ ವ್ಯಾಖ್ಯಾನ ನನಗೆ ಅಕ್ಷರಶಃ ಸತ್ಯವೆನಿಸಿತು. ಎಲ್ಲರ ಜೀವನದ ಕತೆಗಳು ಪ್ರತ್ಯೇಕ ನಿರೂಪಣೆ ಮಾಡುತ್ತಾ, ಜೊತೆ ಜೊತೆಗೆ ಹೆಣೆಯುವ ರೀತಿ ಇಷ್ಟವಾಯಿತು. ಎಲ್ಲರಿಗು ಗೊತ್ತಿರುವ ಚಿಕ್ಕ ಚಿಕ್ಕ ವಿಷಯಗಳು ಸಹ ಗಾಢವಾದ ಚಿಂತನೆಗೆ ದಾರಿಮಾಡಿಕೊಡುತ್ತವೆ ಎನಿಸಿತು. ಅವರ ಸರಳ ಸಹಜ ನಿರೂಪಣೆ ಎಲ್ಲಾ ವರ್ಗದ ಓದುಗರನ್ನು ಸೆಳೆಯುತ್ತದೆ ಎನ್ನುವುದರಲ್ಲಿ ಎರಡು ಮಾತ್ತಿಲ್ಲ.
ಜೀವನದ ಹಾದಿ ಒನ್ ವೇ. ಬೇಕೆಂದರೆ ಹಿಂದುರುಗಿ ನೋಡಬಹುದೇ ಹೊರತು ಹಿಂದುರುಗಿ ಹೋಗಲಾರೆವು. ನಮ್ಮ ಗುರಿ ಸಾಧನೆಗೆ ನಾವು ಆರಿಸಿದ ದಾರಿ ಕೆಲವೊಮ್ಮೆ ನಮ್ಮನ್ನು ಬೇರೆಡೆ ಕರೆದುಕೊಂಡು ಹೋಗಬಹುದು ಅಥವಾ ಗುರಿ ಸೇರುವ ಮೊದಲೇ ಕೊನೆಯಾದಂತೆ ಅನಿಸಬಹುದು. ಗುರಿ ಬದಲಿಸಬೇಕೋ..?, ದಾರಿ ಬದಲಿಸಬೇಕೂ..?, ಕಾಣದ ದಾರಿಯನ್ನು ಹುಡುಕಬೇಕೋ..?, ಹೊಸ ದಾರಿಯನ್ನು ನಾವೇ ಸೃಷ್ಟಿಸಬೇಕೂ..?. ಆ ಕ್ಷಣಕ್ಕೆ ಆ ಜಾಗದಲ್ಲಿ ನಿಂತು ಮಾಡುವ ನಿರ್ಧಾರದ ಮೇಲೆ ನಮ್ಮ ಜೀವನ. ಒಮ್ಮೊಮ್ಮೆ ಯೋಚಿಸಲು ಸಹ ಸಮಯ ಸಿಗದೇ ಹೋಗಬಹುದು. ಯಾವುದೇ ಸಲಹೆಗಳು ಸಿಕ್ಕರೂ , ಒತ್ತಡಗಳು ಇದ್ದರೂ ಕೊನೆಗೆ ನಿರ್ಧಾರ ನಮ್ಮದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಆಯ್ಕೆ ಸಾಧ್ಯವಾದಷ್ಟು ಇನ್ನೊಬ್ಬರಿಗೆ ತೊಡಕಾಗದೆ, ಸಹಾಯವಾಗುವಂತ್ತಿದ್ದರೆ ಅದೇ ಸಾರ್ಥಕತೆ. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ ಅನಿವಾರ್ಯ. ಸಂತೋಷ ನೆಮ್ಮದಿಯನ್ನು ದಾರಿಯ ಕೊನೆಯಲ್ಲಿ ಹುಡುಕದೆ ದಾರಿಯುದ್ದಕ್ಕೂ ಕೊಂಡುಕೊಳ್ಳುವಂತಾದರೆ ನಮ್ಮ ಮಟ್ಟಿಗೆ ನಾವು ಯಶಸ್ವಿ ಎನ್ನುವುದು ನನ್ನ ಅಭಿಪ್ರಾಯ.
- ಪ್ರಿಯ ಕರ್ಜಿಗಿ
Comments
Post a Comment