Dreamy Facts
ಮೂಕಜ್ಜಿಯ ಕನಸಗಳು
- ಡಾ. ಕೆ. ಶಿವರಾಮ ಕಾರಂತ
ಮೂಕಜ್ಜಿಯ ಕನಸುಗಳು ನನಗೆ ವಯಕ್ತಿಕವಾಗಿ ಮನಸಿಗೆ ಹತ್ತಿರವಾದ ಒಂದು ಪುಸ್ತಕ. ಇದು ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ಏಕಾಯಿತು ಅಂತ ಪುಸ್ತಕ ಓದಿಮುಗಿಸುವಷ್ಟ್ರಲ್ಲಿ ಗೊತ್ತಾಗಿ ಹೋಯ್ತು.
ಅಜ್ಜಿ ಎಂದೊಡನೆ ಹಳೆಯ ಕಾಲದ ಕಟ್ಟುಪಾಡುಗಳನ್ನು ಸಾರುವವಳು ಎನ್ನುವ ಕಲ್ಪನೆ ಬರುವುದು ಸಹಜ. ಆದರೆ ಕಾರಂತರ ಮೂಕಜ್ಜಿಯ ತತ್ವ ಹಾಗೂ ನಂಬಿಕೆಗಳೇ ಬೇರೆ. ಮೂಕಾಂಬಿಕೆ ಎನ್ನುವ ಹೆಸರಿನಿಂದಾಗಿ ‘ಮೂಕಿ’ ಎಂದು ಕರೆಸಿಕೊಂಡರೂ, ಹೆಸರಿನಂತೆ ಮೂಕಿಯಾಗಿಯೆ ಕೆಲವು ವರ್ಷಗಳನ್ನು ಕಳೆದವಳು.
ಬಾಲ್ಯದಲ್ಲೇ ವಿಧವೆಯಾಗಿ ಒಂಟಿ ಜೀವನ ನಡೆಸುವ ಮೂಕಜ್ಜಿಗೊಂದು ದಿವ್ಯದೃಷ್ಟಿಯಿದೆ. ಒಬ್ಬ ವ್ಯಕ್ತಿಯನ್ನು ನೋಡಿ ಅವರ ಗುಣಚರಿತ್ರೆಗಳನ್ನು ಕಾಣುವ ಶಕ್ತಿ ಅಜ್ಜಿಗಿದೆ. ಕೆಲವೊಮ್ಮೆ ಯಾವುದೋ ಹಳೆಯ, ತಾನೆಂದೂ ನೋಡಿರದ ವಸ್ತುಗಳನ್ನು ಕೈಯಲ್ಲಿ ಹಿಡಿದಾಗ ಅಥವಾ ನೋಡಿರದ ಜಾಗಕ್ಕೆ ಹೋದಾಗ ಅವಳ ಕಣ್ಣೆದುರಿಗೆ ಆ ವಸ್ತುವಿಗೆ/ಸ್ಥಳಕ್ಕೆ ಸಂಬಂಧಿಸಿದ ದೃಶ್ಯಾವಳಿಗಳು ಹಾದುಹೋಗುತ್ತವೆ. ಕಣ್ಣಿಗೆ ಕಂಡದನ್ನ ತನ್ನೊಳಗೆ ಗೊಣಗಿಕೊಳ್ಳುವ ಅಜ್ಜಿ, ಯಾರಿಗಾದರೂ ಏನಾದರೂ ಬುದ್ಧಿವಾದ ಹೇಳಬೇಕೆಂದರೆ ಯಾವ ದಾಕ್ಷಿಣ್ಯವನ್ನು ಎಣಿಸದೆ ಅನಿಸಿದನ್ನು ಹೇಳುವ ಸ್ವಭಾವದವಳು.
ತನ್ನೊಂದಿಗೆ ತಾನೇ ಕಾಲಕಳೆಯಲು ಬಯಸುವ ಅಜ್ಜಿಗೆ ಸಾವಿರಾರು ದೇವರುಗಳಲ್ಲಿ ನಂಬಿಕೆಯಿಲ್ಲ. ನಮ್ಮನ್ನು ಕಾಯುವ ದೈವ ಒಂದು, ಆ ದೈವವು ಅವನೋ, ಅವಳೋ, ಅದೋ ತಿಳಿಯದು. ದೇವರಿಗೆ ರೂಪ, ಲಿಂಗ, ಆಕಾರ, ಅವತಾರಗಳನ್ನು ಕೊಟ್ಟವರು ಜನರು. ಗೀತೆ, ಪುರಾಣಗಳಲ್ಲಿ ದೇವರಿಗೆ ಅವತಾರ ಕೊಟ್ಟವರು ಜನರೇ. ಅದರಲ್ಲಿ ಬರುವ ದೇವತೆಗಳೆಲ್ಲರಲ್ಲು ಪೂರ್ತಿ ಒಳ್ಳೆಯ ಗುಣಗಳೇ ಇಲ್ಲ, ಹಾಗೆಯೆ ರಕ್ಷಸರೆಲ್ಲರಲ್ಲು ಕೆಟ್ಟ ಗುಣಗಳೇ ಇಲ್ಲ. ಎಲ್ಲರಲ್ಲಿರುವ ಒಳ್ಳೆಯದನ್ನು ಒಪ್ಪಬೇಕು ಕೆಟ್ಟದನ್ನು ಬಿಡಬೇಕು ಎಂಬುದು ಮೂಕಜ್ಜಿಯ ವಾದ.
ವೈರಾಗ್ಯ, ಮೋಕ್ಷ, ಮುಕ್ತಿಯ ಬಗ್ಗೆ ಮೂಕಜ್ಜಿಯ ನಿಲುವೇ ಬೇರೆ. ಅವುಗಳನ್ನು ಹೊಂದುವುದೇ ಜೀವನದ ಗುರಿಯಾದರೆ, ಈ ಸೃಷ್ಠಿಗೆ ಅರ್ಥವೇನು? ಹೆಣ್ಣು ಗಂಡುಗಳ ಸಮಾಗಮವೆ ಇಲ್ಲವಾದರೆ ಸೃಷ್ಠಿಯ ಉಳಿವೆಲ್ಲಿ? ಅವಳ ಪ್ರಕಾರ ದೇವರೆಂದರೆ ತಾಯಿಯಂತೆ, ತಾಯಿಗೆ ತನ್ನ ಎಲ್ಲಾ ಮಕ್ಕಳು ಒಂದೇ. ಮಕ್ಕಳು ಕೇಳಿದ್ದನೆಲ್ಲ ತಾಯಿ ಕೊಡಬೇಕೆಂದಿಲ್ಲ, ಅವರಿಗೆ ಏನು ಒಳ್ಳೆಯದೋ ಅದನ್ನು ಕೊಟ್ಟೆ ಈ ಭೂಮಿಗೆ ಕಳಿಸಿರುತ್ತಾಳೆ. ಮತ್ತೆ ಅವಳೆದುರು ನಿಂತು ನನಗೆ ಅದು ಕೊಡು ಇದು ಕೊಡು ಎಂದು ಬೇಡುವುದರಲ್ಲಿ ಅವಳಿಗೆ ಆಸಕ್ತಿಯಿಲ್ಲ.
ಊರ ಜನರೆಲ್ಲ ಮೂಕಜ್ಜಿಯನ್ನು ಮರುಳೆ ಎಂದರೂ, ಅವಳಲ್ಲಿ ಅತೀವ ನಂಬಿಕೆ-ವಿಶ್ವಾಸ ಇಟ್ಟವ, ಅವಳ ಮಾತುಗಳಲ್ಲಿ ಸತ್ಯವನ್ನು ಕಾಣುವವ ಮಾತ್ರ ಅವಳ ಅಣ್ಣನ ಮೊಮ್ಮಗ, ಹಾಗಾಗಿ ಸಂಭಂದದಲ್ಲಿ ಅವಳಿಗೂ ಮೊಮ್ಮಗನಾದ ಸುಬ್ಬ(ಸುಬ್ರಾಯ) ಮಾತ್ರ. ಚರಿತ್ರೆ, ಮನುಕುಲದ ವಿಕಸನದ ಬಗ್ಗೆ ಆಸಕ್ತಿ ಇರುವ, ಒಂದು ಹಂತದಲ್ಲಿ ಪೌರತತ್ವ ಸಮೀಕ್ಷಕನಂತೆ ಕಾಣುವ ಸುಬ್ಬನ ನಿರೂಪಣೆಯಲ್ಲಿ ಮೂಕಜ್ಜಿಯ ಕನುಸುಗಳನ್ನು ಸೊಗಸಾಗಿ ಹೆಣೆದಿದ್ದಾರೆ ಕಾರಂತರು.
- ಪ್ರಿಯ ಕರ್ಜಿಗಿ
Comments
Post a Comment